ಮೂನ್‍ಸ್ಟೋನ್ - 
ಪ್ರತ್ಯಾಮ್ಲ ಫೆಲ್ಡ್‍ಸ್ಟಾರ್ ಖನಿಜ.  ಕ್ರಿಪ್ಟೊಪೆರ್‍ತೈಟ್ ಎಂದು ಹೆಸರು.  ಅರ್ಧಪಾರಕವಾಗಿಯೊ (ಸೆಮಿಟ್ರಾನ್ಸ್‍ಪೆರೆಂಟ್) ಪಾರದೀಪಕವಾಗಿಯೊ (ಟ್ರಾನ್ಸ್‍ಲೂಸೆಂಟ್) ಇರುವಂಥದು.  ಚಂದ್ರಶಿಲೆ ಎಂದೂ ಕರೆಯುವುದಿದೆ.  ಸ್ವಚ್ಛ ಹಾಲಿನ ಇಲ್ಲವೆ ನೀಲಿ ಮಿಶ್ರಿತ ಬಿಳುಪು ಬಣ್ಣದ್ದು.  ಇದರಲ್ಲಿ ವಿವಿಧ ಬಣ್ಣಗಳ ದೃಶ್ಯಾವಳಿಯನ್ನು ಕಾಣಬಹುದು.  ಥಳ ಥಳಿಸುವ ಇದರ ಹೊಳಪಿನಿಂದ ಇದು ಬೆಳ್ಳಿಯನ್ನು ಹೋಲುತ್ತದೆ.  ಇದರ ಹರಳುಗಳ ಆಕಾರ ಸ್ತಂಭದಂತೆ.  ಸಾಪೇಕ್ಷ ಸಾಂದ್ರತೆ 2.55-2.6.  ಕಾಠಿಣ್ಯಾಂಕ 6-6.5.  ಪೊಟ್ಯಾಷ್ ಮತ್ತು ಸೋಡ ಫೆಲ್ಡ್‍ಸ್ಪಾರುಗಳಾಗಿರುವ ಆರ್ಥೊಕ್ಲೇಸ್ ಹಾಗೂ ಆಲ್ಬೈಟ್ ಅಣುಗಳ ಅಂತರಬೆಳೆವಣಿಗೆಯಿಂದ ಮೂನ್‍ಸ್ಟೋನ್ ಸ್ಪಟಿಕೀಭವಿಸುತ್ತದೆ.  ಈ ಎರಡು ಖನಿಜಗಳು ಪರಸ್ಪರ ಸೂಕ್ಷ್ಮಸಮ್ಮಿಳನದಿಂದ ಉಂಟಾಗಿದ್ದು ತನ್ನ ಮೇಲೆ ಬಿದ್ದ ಬೆಳಕನ್ನು ವಿಭಜಿಸಿ ವಿವಿಧ ವರ್ಣಗಳನ್ನು ಇದು ನೀಡುತ್ತದೆ.  ಈ ವೈಶಿಷ್ಟ್ಯದಿಂದಾಗಿ ಮೂನ್‍ಸ್ಟೋನ್ ದ್ವಿತೀಯದರ್ಜೆಯ ರತ್ನವೆನಿಸಿದರೂ ಇದನ್ನು ಆಭರಣಗಳಲ್ಲಿ ಬಳಸುತ್ತಾರೆ.

	ಮೂನ್‍ಸ್ಟೋನ್ ಶ್ರೀಲಂಕಾ ದ್ವೀಪದ ಪೆಗ್ಮಟೈಟ್ ಶಿಲೆಗಳಲ್ಲೂ ನದಿಗಳ ಗ್ರಾವೆಲ್‍ಗಳಲ್ಲೂ ದೊರೆಯುತ್ತದೆ.  ಭಾರತದಲ್ಲಿ ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಅಭ್ರಕಭರಿತ ಪೆಗ್ಮಟೈಟ್ ಶಿಲೆಗಳಲ್ಲಿ ಇದನ್ನು ಕಾಣಬಹದು.

	ಶ್ರೀಲಂಕಾದ ಅನೂರಾಧಾಪುರದಲ್ಲಿಯ ಬುದ್ಧ ದೇವಾಲಯಗಳಲ್ಲಿ ಈ ಶಿಲೆಯಲ್ಲಿ ಕೆತ್ತಿರುವ ಸಣ್ಣ ಸಣ್ಣ ವಿಗ್ರಹಗಳನ್ನು ಕಾಣಬಹುದು.
(ಸಿ.ಎಸ್.ಎನ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ